ಭಾನುವಾರ, ಡಿಸೆಂಬರ್ 26, 2010

ವಚನಗಳಲ್ಲಿ ಪ್ರಣವ -3

ಆ ಪರಬ್ರಹ್ಮವೆ ಓಂಕಾರವಪ್ಪ ಪ್ರಣವಸ್ವರೂಪು, ಪರಮಾತ್ಮನೆನಿಸಿ
ಪರಶಿವನಾಮದಿಂ ಪರಶಕ್ತಿಸಂಯುಕ್ತವಾಗಿ,
ಆಕಾರ ಉಕಾರ ಮಕಾರವೆಂಬ ಬೀಜಾಕ್ಷರಂಗಳಿಂ ನಾದಬಿಂದುಕಳೆಯಾಗಿ,
ದಶನಾಡಿ ದಶವಾಯು ದಶವಿಧೇಂದ್ರಿಯ
ಸಪ್ತಧಾತು ಷಡುಚಕ್ರ ಷಡುವರ್ಗ ಪಂಚಭೂತ
ಚತುರಂತಃಕರಣ, ತ್ರಿದೋಷಪ್ರಕೃತಿ,
ತ್ರಯಾವಸ್ಥೆ, ಸತ್ವ ರಜ ತಮ, ಅಂಗ ಪ್ರಾಣ, ಅರಿವು ಭಾವ ಜ್ಞಾನ,
ಮೊದಲಾದ ಬಾಹತ್ತರ ವಿನಿಯೋಗಮಂ ತಿಳಿದು
ಭೂಲೋಕ ಭುವರ್ಲೋಕ ಸ್ವರ್ಲೋಕ ಮಹರ್ಲೋಕ ಜನಲೋಕ
ತಪೋಲೋಕ, ಸತ್ಯಲೋಕ,
ಅತಳ, ವಿತಳ, ಸುತಳ, ಮಹಾತಳ, ರಸಾತಳ, ತಳಾತಳ, ಪಾತಾಳಂಗಳೊಳಗಾದ
ಚತುರ್ದಶಭುವನಂಗಳೊಳಹೊರಗೆ ಅಂತರ್ಗತ ಬಹಿರ್ಗತವಾಗಿ,
ನಾದಮಂ ತೋರಿ ಭರ್ಗೊದೇವನೆಂಬ ನಾಮಮಂ ತಳೆದು
ಊಧ್ರ್ವರೇತುವೆನಿಸಿ,
ವಿಶ್ವತೋಮುಖ, ವಿಶ್ವತಶ್ಚಕ್ಷು, ವಿಶ್ವತೋ ಬಾಹು, ವಿಶ್ವತಃಪಾದದಿಂ
ವಿಶ್ವಗರ್ಭೀಕೃತವಾಗಿ,
ಉತ್ಪತ್ತ್ಯಸ್ಥಿತಿಲಯಂಗಳನೆಣಿಕೆಗೆಯ್ಯದೆ
ದೇವತಾಂತರದಿಂ ಮಾನಸಾಂತರವನನುಕರಿಸಿ,
ಮಾನಸದಲ್ಲಿ ರವಿಕೋಟಿತೇಜದಿಂ ಸಕಲಪಾಪಾಂಧಕೂಪಮಂ ತೊಳೆದು
ಸುರಕ್ಷಿತದಿಂ ಪ[ರಾ] ಪಶ್ಯಂತಿ ಸುಮಧ್ಯ ವೈಖರಿಯೆಂಬ ಚತುವರ್ಿಧದಿಂ
ದುರಿತ ದುರ್ಮದ ಕಾಲಮೂಲಾದಿಮೂಲಮಂ ಬಗೆಗೊಳ್ಳದೆ,
ಚಿತ್ಸುಧಾಮೃತವೆ ಅಂಗವಾಗಿ
ಚಿದರ್ಕಪ್ರಭಾಕರವೆ ಪ್ರಾಣವಾಗಿ,
ಸೌರಾಷ್ಟ್ರ ಸೋಮೇಶ್ವರನಿಂತಿಂತು ಕರ್ತನು-ಭರ್ತನು ತಾನೆ ಆಗಿ,
ಪರಮಸ್ವಯಂಭೂ ಸ್ವತಃಸಿದ್ಧದಿಂ ಸಚ್ಚಿದಾನಂದಸ್ವರೂಪದಿಂ
ನಿತ್ಯಪರಿಪೂರ್ಣತ್ವದಿಂದೆಡದೆರಹಿಲ್ಲದಿರ್ಪನಯ್ಯಾ.
................

೫. ಜೀವಭಾವದ ಹಂಸ ಜಪದಲ್ಲಿ ದ್ವಾದಶಾಂತ ಕೂಡಿ ಶಿವಜಪವಾಯಿತ್ತು.
ಆ ಶಿವಜಪದಲ್ಲಿಯೇ ಪ್ರಣವವಡಕವಾಗಿಪ್ಪುದು.
ಇದಕ್ಕೆ ಶ್ರುತಿ:
`ತದ್ಯೋ ಹಂಸಃ ಸೋಹಂ ಯೋಸೌಸೋಹಂ'
ಆ ಪ್ರಣವದ ನಿರಾಳದಾದಿಬಿಂದು,
ಆ ಬಿಂದುವಿನ ಸ್ವಯಂಪ್ರಕಾಶಲಿಂಗವೇ ತಾವಾಗಿಪ್ಪರಯ್ಯಾ,
ಸೌರಾಷ್ಟ್ರ ಸೋಮೇಶ್ವರಾ ನಿಮ್ಮ ಶರಣರು.

                                                             ...............ಆದಯ್ಯ



ವಚನದಲ್ಲಿ ಪ್ರಣವ 2

ಆ ಅಖಂಡ ಜ್ಯೋತಿರ್ಮಯವಾಗಿಹ ಪರಮೋಂಕಾರ ಪ್ರಣಮದ
ಜ್ಯೋತಿಸ್ವರೂಪದಲ್ಲಿ ಮನಸ್ಸು ಪುಟ್ಟಿತ್ತು.
ಆ ಪ್ರಣವದ ದರ್ಪಣಾಕಾರದಲ್ಲಿ ಶ್ರೋತ್ರ ಪುಟ್ಟಿತ್ತು.
ಆ ಪ್ರಣವದ ಅರ್ಧಚಂದ್ರಕದಲ್ಲಿ ತ್ವಕ್ಕು  ಪುಟ್ಟಿತ್ತು.
ಆ ಪ್ರಣವದ ಕುಂಡಲಾಕಾರದಲ್ಲಿ ನೇತ್ರ  ಪುಟ್ಟಿತ್ತು.
ಆ ಪ್ರಣವದ ದಂಡಕಸ್ವರೂಪದಲ್ಲಿ ಜಿಹ್ವೆ  ಪುಟ್ಟಿತ್ತು.
ಆ ಪ್ರಣವದ ತಾರಕಸ್ವರೂಪದಲ್ಲಿ ಘ್ರಾಣ  ಪುಟ್ಟಿತ್ತು ನೋಡಾ.
ಇದಕ್ಕೆ ಚಕ್ರಾತೀತಾಗಮೇ :
ಓಂಕಾರ ಜ್ಯೋತಿರೂಪೇ ಚ ಮಾನಸಂ ಚ ಸಮುದ್ಭವಂ |
ಓಂಕಾರ ದರ್ಪಣಾಕಾರೇ ಶ್ರೋತ್ರಂ ಚೈವ ಸಮುದ್ಭವಂ ||
ಓಂಕಾರರಾರ್ಧಚಂದ್ರೇ ಚ ತ್ವಕ್  ಚೈವ ಸಮುದ್ಭವಂ |
ಓಂಕಾರ ಕುಂಡಲಾಕಾರೇ ನೇತ್ರಂ ಚೈವ ಸಮುದ್ಭವಂ ||
ಓಂಕಾರ ದಂಡಕರೂಪೇ ಚ ಜಿಹ್ವಾ ಚೈವ ಸಮುದ್ಭವಂ |
ಓಂಕಾರ ತಾರಕರೂಪೇ ಘ್ರಾಣಂ ಚೈವ ಸಮುದ್ಭವಂ |
ಇತಿ ಷಷ್ಠಮುಖಂ ದೇವಿ ಸ್ಥಾನಸ್ಥಾನೇಷು ಜಾಯತೇ ||
ಎಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.

............ ಬಾಲಸಂಗಯ್ಯ ಅಪ್ರಮಾಣದೇವ

ವಚನಗಳಲ್ಲಿ ಪ್ರಣವ!

ಪ್ರಣವದ ಚಿನ್ನಾದವೆ ಅಕಾರ,
ಪ್ರಣವದ ಚಿದ್ಬಿಂದುವೆ ಉಕಾರ,
ಪ್ರಣವದ ಚಿತ್ಕಲೆಯೆ ಮಕಾರ.
ಪ್ರಣವದ ಬಟ್ಟೆಯೆ ಬಕಾರ,
ಪ್ರಣವದ ಸೋಪಾನವೆ ಸಕಾರ,
ಪ್ರಣವದ ವರ್ತನೆಯೆ ವಕಾರ.
ಪ್ರಣವದ ಬಹಳಾಕಾರವೆ ಬಕಾರ
ಪ್ರಣವದ ಸಾಹಸವೆ ಸಕಾರ,
ಪ್ರಣವದ ವಶವೆ ವಕಾರ.
ಪ್ರಣವದ ಬರವೆ ಬಕಾರ,
ಪ್ರಣವದ ಸರವೆ ಸಕಾರ,
ಪ್ರಣವದ ಇರವೆ ವಕಾರ.
ಪ್ರಣವದ ಬಲ್ಮೆಯೆ ಬಕಾರ,
ಪ್ರಣವದ ಸಲ್ಮೆಯೆ ಸಕಾರ,
ಪ್ರಣವದ ಒಲ್ಮೆಯೆ ವಕಾರ.
ಪ್ರಣವದ ಪಶ್ಯಂತಿವಾಕೇ ಬಕಾರ,
ಪ್ರಣವದ ಸೂಕ್ಷ್ಮವಾಕೇ ಸಕಾರ,
ಪ್ರಣವದ ವೈಕಲ್ಯವಾಕೇ ವಕಾರ.
ಪ್ರಣವದ ಬಹಳ ಜ್ಞಾನವೆ ಬಕಾರ,
ಪ್ರಣವದ ಸಹಜ ಜ್ಞಾನವೆ ಸಕಾರ,
ಪ್ರಣವದ ಶುದ್ಧ ಜ್ಞಾನದೀಪ್ತಿಯೆ ವಕಾರ.
ಪ್ರಣವದ ಮೂಲವೆ ಬಕಾರ,
ಪ್ರಣವದ ಶಾಖೆಯೆ ಸಕಾರ,
ಪ್ರಣವದ ಫಲವೆ ವಕಾರ.
ಪ್ರಣವದ ಬಹಳ ನಾದವೆ ಬಕಾರ,
ಪ್ರಣವದ ಸನಾದವೆ ಸಕಾರ,
ಪ್ರಣವದ ಸುನಾದವೆ ವಕಾರ.
ಪ್ರಣವದ ಭಕ್ತಿಯೆ ಬಕಾರ,
ಪ್ರಣವದ ಸುಜ್ಞಾನವೆ ಸಕಾರ,
ಪ್ರಣವದ ವೈರಾಗೈವೆ ವಕಾರ.
ಪ್ರಣವದ ಶಬ್ದವೆ ಬಕಾರ,
ಪ್ರಣವದ ನಿಃಶಬ್ದವೆ ಸಕಾರ,
ಪ್ರಣವದ ಶಬ್ದ ನಿಶಬ್ದದ ವಾಕುಗಳೆ ವಕಾರ.
ಇಂತಪ್ಪ ಪ್ರಣವ ಮಂತ್ರಂಗಳೇ
ಬಸವಾ ಎಂಬ ಪ್ರಣವ ನಾದತ್ರಯಸಂಬಂಧವಾದುದಂ
ತ್ರಿಪುರಾಂತಕಲಿಂಗದಲ್ಲಿ ಅರಿದು ಸುಖಿಯಾಗಿ
ಆನು  ಬಸವಾ, ಬಸವಾ, ಬಸವಾ, ಎಂದು
ಜಪಿಸುತ್ತಿದ್ದೆನಯ್ಯಾ.

                                         ....................ಕಿನ್ನರಿ ಬ್ರಹ್ಮಯ್ಯ

ಸೋಮವಾರ, ಡಿಸೆಂಬರ್ 13, 2010

ಕುರುಹು ಹಿಡಿದ ಕಾರಣ!

ಅರಿಯದ ಕಾರಣ ಕುರುಹುವಿಡಿವೆನಲ್ಲದೆ
ಅರಿದ ಬಳಿಕ ಇನ್ನೇನೊ ?
ಬಿಟ್ಟಡೆ ಸಮಯವಿರೋಧ, ಬಿಡದಿದ್ದರೆ ಜ್ಞಾನವಿರೋಧ.
ಗುಹೇಶ್ವರಲಿಂಗವು ಉಭಯ ದಳದ ಮೇಲೈದಾನೆ ಕಾಣಾ ಸಿದ್ಧರಾಮಯ್ಯಾ
                                                                        ............................ಅಲ್ಲಮ ಪ್ರಭು


ಇದು ಶರಣರ ತತ್ವದ ಪ್ರಮುಖ ಅಂಶ. ಇಷ್ಟ ಲಿಂಗದ ಅವಶ್ಯಕತೆಯ ಬಗ್ಗೆ ಸ್ಪಷ್ಟತೆ ನೀಡುತ್ತೆ.